Dattarupadinda

ದತ್ತರೂಪದಿಂದ

॥ ♫ ॥

ದತ್ತರೂಪದಿಂದಿಳಿದು ಬಂದ ಧರೆಯೊಳಗೆ ಪುಟ್ಟ ಕಂದ
ಅತ್ತು ಕರೆವ ಭಕ್ತರನು ಉದ್ಧರಿಸಿ ಸಲುಹಲೆಂದು ಬಂದ ॥ಪ॥

॥ ದತ್ತರೂಪ ॥

ಹೊರನೋಟದಲ್ಲಿ ಎಷ್ಟೊಂದು ಸೆಳೆತ, ದೇವರಿಗೆ ದೇವ ಈತ
ಮರುಭೂಮಿಯಲ್ಲಿ ನೀರನ್ನು ನೀಡಿ ಮಹಿಮೆಯನ್ನು ತೋರುವಾತ ॥ಅ.ಪ॥

॥ ದತ್ತರೂಪ ॥ ♫ ॥

ನೀರಿನಿಂದ ದೀಪವನು ಉರಿಸಿ ಜಗದೀಶನಾದೆ ನೀನು
ಜಾರಿ ಬೀಳದೆ ಮರದಿ ಪವಡಿಸಿದ ದೇವಕುಲದ ಭಾನು

ಇಂಧನವಿಲ್ಲದೇ ಕಾರು ನಡೆಸಿದ ಸುಂದರ ಪ್ರಭುದೇವ
ಇಂದಿರರಮಣನೇ ನಿನ್ನ ಕಂಡೊಡನೆ ಬಹುದು ಭಕ್ತಿಭಾವ ॥೧॥

॥ ದತ್ತರೂಪ ॥ ♫ ॥

ಸಂತತಿಯಿಲ್ಲದ ಭಕ್ತನನ್ನು ಕರುಣಾಕ್ಷಿಯಿಂದ ಕಂಡು
ಸಂತಸಗೊಳಿಸುವ ಸಂತತಿ ನೀಡುವೇ ಅದರಲ್ಲಿಯೂ ಗಂಡು

ಎಲ್ಲಾ ದೇವರ ರೂಪತಾಳುವ ಮೂಲದೇವ ಬಾಬಾ
ಅಲ್ಲಾ, ಯೇಸು, ಎಲ್ಲಾ ನೀನೇ, ಬೇಗ ಓಡಿ ಬಾಬಾ ॥೨॥

॥ ದತ್ತರೂಪ ॥ ♫ ॥

ಇಲ್ಲೂ ಇರುವೇ, ಅಲ್ಲೂ ಇರುವೇ ಎಲ್ಲಾ ಕಡೆ ತುಂಬಿರುವೆ
ಸಲ್ಲುವ ಪ್ರಾರ್ಥನೆ ಮಾಡಿದ ತಕ್ಷಣ ನನ್ನ ಬಳಿಗೆ ಬರುವೆ

ಯಾವ ಭೀಕರದ ರೋಗವಿರಲಿ, ಗುಣಪಡಿಸಿ ಸಲುಹಿದಾತಾ
ಭಾವಭಕ್ತಿಯಲಿ ನಂಬಿ ನಡೆದವರ ಬಿಡದೆ ಪೊರೆವನೀತ ॥೩॥

॥ ದತ್ತರೂಪ ॥ ♫ ॥

ಸತ್ತ ಭಕ್ತನನು ಕೂಡ ಬದುಕಿಸಿದ ದತ್ತ ಗುರುವೇ ನೀನು
ಮತ್ತೆ ಮತ್ತೆ ನಿನ್ನನ್ನು ನೆನೆಯೆ ಬದುಕೆಲ್ಲ ಹಾಲು ಜೇನು

ಮುಂಬಯಿ ನಗರದಿ ನೆಲೆಸಿ ನೀನು ವೈವಿಧ್ಯ ತೋರಿ ಮೆರೆದೆ
ಸಾಂಬಶಿವನ ನಿಜಲಿಂಗ ಸ್ಥಾಪಿಸಿ ಸಕಲರನ್ನು ಪೊರೆದೆ ॥೪॥

॥ ದತ್ತರೂಪ ॥ ♫ ॥

ನಿನ್ನ ಮಹಿಮೆಯನು ಹಾಡಿ ಹೊಗಳಲಿಕೆ ಜನುಮ ಜನುಮ ಸಾಲ
ಎನ್ನ ಮನದ ಈ ತೊದಲ ನುಡಿಯ ಸ್ವೀಕರಿಸು ದತ್ತಲೋಲ

ಅಮರವಾಣಿ ಬಹುಶುಭದವಾಣಿ ಗುರುರಾಜ ನಿನ್ನ ನುಡಿಯು
ಭ್ರಮರ ನಾನು, ಮಕರಂದ ನೀನು, ಜಗವೆಲ್ಲ ನಿನ್ನ ಗುಡಿಯು ॥೫॥

॥ ದತ್ತರೂಪ ॥