ದಯಾಮಯ ಗುರು ಕರುಣಾಮಯ
ಕರುಣಾಮಯ ಗುರು ಪ್ರೇಮಾಮಯ
ಪರಮ ಸ್ವರೂಪನು ತಾನಂತೆ
ಅರಿಯಲು ಭಕ್ತಿಯು ಬೇಕಂತೆ
ಒಲಿದರೆ ಪಾವನನವನಂತೆ
ಸಂಸಾರದ ಭಯ ಅವಗಿಲ್ಲಂತೆ ॥೧॥
॥ಪ॥
ಗುರುವಿಗೆ ಸಮನಾರಿಲ್ಲಂತೆ
ಗುರು ಪಾದವ ನಂಬಿರಬೇಕಂತೆ
ದೃಢತೆಯು ತನಗಿರಬೇಕಂತೆ
ಧೃತಿಗೆಡದೆ ತಾನಿರಬೇಕಂತೆ ॥೨॥
॥ಪ॥
ಪಾಪಿಗೆ ತಾ ಬಹುದೂರಂತೆ
ದುರ್ಮಾರ್ಗಿಗೆ ಕಾಣನು ಗುರುವಂತೆ
ಕುಟಿಲರಿಗೊಲಿಯನು ತಾನಂತೆ
ಕುಹಕಿಗೆ ಎಂದು ಸಿಗನಂತೆ ॥೩॥
॥ಪ॥
ಜ್ಞಾನವೆ ತನ್ನುಸಿರಾಗಿಹುದು
ಉಸುರಲು ಪಾವನವಾಗುವುದು
ಸೇವೆಯ ಸಾಧನೆಯಾಗಿಹುದು
ಗುರು ಕರುಣೆಯ ಧನ್ಯನ ಮಾಡುವುದು ॥೪॥
॥ಪ॥
ಶರಣಾಗತರನು ಕಾಯುವನು
ಪರಮಾನಂದವ ನುಣಿಸುವನು
ನಿಜ ಭಕ್ತಿಗೆ ಗುರು ತಲೆ ಬಾಗುವನು
ಭವ ಜಲಧಿಯ ದಾಟಿಸಿ ಕಾಯುವನು ॥೫॥
॥ಪ॥
ನಾ ನೀಯೆಂಬುದರನಳಿಯೆಂದಾ
ಮದ ಮತ್ಸರಗಳ ನೀ ಸುಡು ಎಂದಾ
ದುರುಳರಿಗೆ ನಾ ದೂರೆಂದಾ
ದುರಹಂಕಾರಿಗೆ ತಾ ಸಿಗನೆಂದಾ ॥೬॥
॥ಪ॥
ಸದ್ಗುರು ದೊರೆವುದು ದುರ್ಲಭವು
ದೊರೆತರೆ ಜನ್ಮವು ಪಾವನವು
ಸಾರುತಲಿಸುವುವು ಶಾಸ್ತ್ರಗಳು
ಗುರು ಪರಮೇಶ್ವರನಹುದೆಂದೂ ॥೭॥
॥ಪ॥
ಅಚ್ಯುತ ಅನಂತ ಶ್ರೀ ಗುರುವೆ
ಚಿನ್ಮಯ ಜಿದ್ಘನ ನೀ ಗುರುವೆ
ಸದ್ಗುರು ಸದಾನಂದ ಬಾ ಗುರುವೆ
ಕರ ಜೋಡಿಸಿ ನಾ ಶಿರ ಬಾಗಿರುವೆ ॥೮॥
ದಯಾಮಯ ಗುರು ಕರುಣಾಮಯ
ಕರುಣಾಮಯ ಗುರು ಪ್ರೇಮಾಮಯ
CREDITS: dattha guru kanneshwara swamy ashrama, Dodderi, challakere tq