Keli Keli Kula Koti Manavare

॥ ♫ ॥

|| ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ ||

॥ ♫ ॥

ಕೇಳಿ ಕೇಳಿ ಕುಲಕೋಟಿ ಮಾನವರೆ ಸದಾನಂದರ ಮಹಿಮೆಯನು
ಲೋಕದ ಹಿತವನು ಸಾಧಿಸಲು ಕಲಿಯುಗದಲ್ಲಿ ಅವತರಿಸಿದರು ॥ಪ॥

ತ್ರಿಮೂರ್ತಿರೂಪಾ ದತ್ತಾತ್ರೇಯ ಸದ್ಗುರು ಸದಾನಂದ ಮಹಾರಾಜರು
ಸದ್ಭಕ್ತರ ಉದ್ಧಾರ ಮಾಡಲು ಸ್ವಯಂ ಭೂಮಿಯಲ್ಲಿ ಉದ್ಭವಿಸಿದರು ॥೧॥

ತ್ರಿಮೂರ್ತಿ ರೂಪದ ಬಾಲಗುರುಗಳು ಸಿದ್ದಪರ್ವತದಿ ಇದ್ದಿಹರು
ನಿಜರೂಪದಲ್ಲಿ ಬಗಳಾಂಬಿಕೆಯು ಬಾಲಕನನ್ನು ರಕ್ಷಿಸುತಿರಲು ॥೨॥

ದೇವಿ ಸಿದ್ದಿಗೆ ಬಂದ ಸಾಧು ಒಬ್ಬ ದೇವಿಯ ದರುಶನ ಭಾಗ್ಯವ ಪಡೆದ
ಸಾಧು ದೇವಿಯನ್ನು ನೋಡಿದ ಕೂಡಲೇ ಮೂರ್ತಿಯಲ್ಲಿಯೇ ಐಕ್ಯಳಾದಳು ॥೩॥

ಆರು ವರ್ಷದ ಬಾಲಕನೊಬ್ಬ ಸಿಡುಬಿನ ಬೇನೆಯಿಂದ ನರಳುತ್ತಿರಲು
ಬಾಬಾ ಬೇನೆಯನು ಜೀರ್ಣಿಸಿಕೊಂಡು ಬಾಲಕನನ್ನು ಗುಣಪಡಿಸಿದರು ॥೪॥

ದಿವ್ಯ ತೇಜದ ದೈವಿಕ ಶಕ್ತಿಯ ಬಾಲಕ ಕಾಡಲ್ಲಿ ಅಲೆಯುತ್ತಿರಲು
ವನ್ಯಮೃಗಗಳ ಪಶುಪಕ್ಷಿಗಳೇ ಬಾಲಗುರುಗಳ ಸಂಗಾತಿಗಳು ॥೫॥

॥ ಕೇಳಿ ಕೇಳಿ ॥

ಹತ್ತು ವರುಷ ಕಾಡಲಿ ಇವರು ಗೆಡ್ಡೆ ಗೆಣಸುಗಳ ತಿಂದಿಹರು
ಯಕ್ಕಿಯ ಹಾಲನ್ನು ಕುಡಿದು ಇವರು ಗಿಡದ ಮೇಲೆ ಮಲಗುವರು ॥೬॥

ಗಂಗಾತಾಯಿಯ ಜೊತೆಗೆ ಇರಲು ಅನೇಕ ಪವಾಡ ಮಾಡಿಹರು
ಬಾಲಕ ಕಿಡಿಗೇಡಿಯೆಂದು ಜನರು ಕಲ್ಲುಗಳಿಂದ ಹೊಡೆದಿಹರು ॥೭॥

ಗಂಗಾತಾಯಿಯ ಪೋಷಣೆಯಲ್ಲಿ ವರಷ ಎರಡು ಕಳೆದಿರಲು
ಜನಕಲ್ಯಾಣಕ್ಕೆ ಹೋಗುವನೆಂದು ಮರಳಿ ಬರುವನೆಂದು ಹೇಳಿದರು ॥೮॥

ಗಂಗಾತಾಯಿ ದುಃಖಿತಳಾಗಿ ನಿನ್ನ ನೆನಪು ನನಗೇನೆಂದಳು
ಕರುಣೆಯಿಂದಾ ಗಂಗಾತಾಯಿಗೆ ಪಾದುಕೆಗಳನು ನೀಡಿಹರು ॥೯॥

ಗಂಗಾತಾಯಿಯ ಭಕ್ತಿಯಿಂದಲಿ ಪಾದುಕೆಗಳನ್ನು ಪೂಜಿಸುತಿರಲು
ಪಾದರಕ್ಷೆಯ ತೀರ್ಥವ ಕುಡಿದ ಜನರ ಕಾಯ್ಲೆಗಳು ಓಡುವುವು ॥೧೦॥

॥ ಕೇಳಿ ಕೇಳಿ ॥

ಹೀಗೆ ಇರಲು ಗಂಗಾತಾಯಿಯ ಮನಮುಂದೆ ಮುದುಕನು ಬಂದಿಹನು
ಭಿಕ್ಷೆಯ ಬೇಡಲು ಮುದುಕನಿಗೆ ಜೋಳವ ತಂದು ಹಾಕಿದಳು ॥೧೧॥

ಯಾಕೆ ಮಗಳೇ ತಾಯಿ ಪ್ರೇಮದಿಂದ ರೊಟ್ಟಿ ಊಟವ ಮಾಡಿಸುತ್ತಿದ್ದಿ
ಸದಾನಂದನು ಬಂದನೆಂದು ಆಶ್ಚರ್ಯಗೊಂಡಳು ಗಂಗಾತಾಯಿ ॥೧೨॥

ಅಕ್ಕರೆಯಿಂದ ಅಡಿಗೆಯ ಮಾಡಿ ಉಣಬಡಿಸಿದಳು ಗಂಗಾತಾಯಿ
ಊಟವ ಮಾಡಿ ತೃಪ್ತಿಯಿಂದ ಗಂಗಾತಾಯಿಗೆ ಹರಿಸಿದರು ॥೧೩॥

ಜನರೋದ್ದಾರಕೆ ಹೋಗುವನೆಂದು ಬಾಬಾ ಪ್ರಯಾಣ ಹೊರಟಿಹರು
ದಾರಿಯಲಿ ಹೋಗುವಾಗ ಈವನೀ ಸಂಗಪ್ಪ ಬಾಲಗುರುಗಳ ಕಂಡಿಹರು ॥೧೪॥

ಈವನೀ ಸಂಗಪ್ಪ ಬಾಲಗುರುಗಳ ಪರಿಪರಿಯಿಂದ ಉಪಚರಿಸಿದರು
ಸ್ನಾನವ ಮಾಡಿಸಿ ಬಟ್ಟೆಯ ತೊಡಿಸಿ ಊಟವ ಮಾಡಲು ಕಲಿಸಿದರು ॥೧೫॥

॥ ಕೇಳಿ ಕೇಳಿ ॥

ಈವನೀ ಸಂಗಪ್ಪ ಭಕ್ತಿಯಿಂದಲೇ ಗುರುಗಳ ಸೇವೆಯ ಮಾಡುತ್ತಿರಲು
ಹಿರಿಯರ ಮುಂದೆ ಹಾಸ್ಯದಿ ಬಾಬಾ ಕಿಡಿಗೇಡಿತನವ ಮಾಡುವರು ॥೧೬॥

ಈವನೀ ಸಂಗಪ್ಪ ಕೇಳಿದರಾಗ ಹಿಂಗ್ಯಾಕ ಮಾಡುತಿಯಂತ ನೀನು
ಬಾಲಕನಾಗ ಹೇಳಿದನು ಯಾರು ದೊಡ್ಡವರು ನೋಡೆಂದನು ॥೧೭॥

ಅವರ ಮನೆಯ ಎದುರಿಗೆ ಒಂದು ಔದುಂಬರದ ಗಿಡವು ಇರಲು
ಗಿಡದ ಕೆಳಗೆ ಕುಳಿತಿರುವಾಗ ಮುತ್ಯಾನ ರೂಪವ ತೋರಿದರು ॥೧೮॥

ಈವನೀ ಸಂಗಪ್ಪ ಆಗ ಗುರುವಿನ ಚರಣಕೆ ಬೀಳಲು
ಸಾಕ್ಷಾತ್ ನೀನೆ ದೇವರಪ್ಪ ನಿನ್ನ ಬಿಟ್ಟು ಬೇರೆ ದೇವರಿಲ್ಲ ॥೧೯॥

ಈವನೀ ಸಂಗಪ್ಪ ವಿಧಿವಶರಾಗಲು ಬಾಬಾ ಅಂದು ಇರಲಿಲ್ಲ
ಚಿಂತಿತ ಜನರ ಎದುರಿಗೆ ಬಂದು ಅಂತ್ಯಕ್ರಿಯೆ ಮಾಡಿ ಮಾಯವಾದರು ॥೨೦॥

॥ ಕೇಳಿ ಕೇಳಿ ॥

ರಾಯಚೂರು ಜಿಲ್ಲೆಯ ಅಮರೇಶ್ವರದಿ ಅಮರೇಶ್ವರನ ಜಾತ್ರೆ ಇರಲು
ಹಳ್ಳಿಹಳ್ಳಿಯಿಂದ ಜನರೆಲ್ಲರೂ ಕೂಡಿ ಜಾತ್ರೆಗೆ ಹೋಗುತ್ತಿರುವಾಗ ॥೨೧॥

ಗಾಡಿಯ ನಿಲ್ಲಿಸಿ ವಿಶ್ರಾಂತಿಗಾಗಿ ಜನರೆಲ್ಲರೂ ಕುಳಿತಿರುವಾಗ
ಚಹಾ ಮಾಡಿರೆಂದು ಹೇಳಿದರಾಗ ಹಾಲಿಲ್ಲವೆಂದೂ ಹೇಳಿದರು ॥೨೨॥

ಪಕ್ಕದ ಬಾವಿಯ ಹಾಲನು ತಂದು ಚಹಾ ಮಾಡಿರೆಂದು ಹೇಳಿದರು
ಜನರೆಲ್ಲರೂ ಗುರುಗಳನ್ನು ಹಾಲುಬಾವಿ ಸ್ವಾಮಿಯಂದರು ॥೨೩॥

ಕಾಲರಾ ಬೇನೆಯಿಂದ ಅಮರೇಶ್ವರನ ಜಾತ್ರೆಯು ನಿಂತಿರಲು
ಬಾಬಾ ರಥಕ್ಕೆ ಕೈಹಚ್ಚಿದಾ ಕೂಡಲೇ ರಥವು ಚಲಿಸಿತ್ತು ॥೨೪॥

ಏನೋ ಮಗನೇ ನಿಮ್ಮಪ್ಪನ ಬಂಡಿಯೆಂದು
ಪೋಲಿಸ ಅಧಿಕಾರಿ ಹೊಡೆಯಲು ಬಂದ
ಬಾಬಾರ ಸಿಟ್ಟು ಮುಗಿಲನು ಮುಟ್ಟಿತು
ತಿರುಗಿಸಿ ಹೊಡೆದರು ಅಧಿಕಾರಿಗೆ ॥೨೫॥

॥ ಕೇಳಿ ಕೇಳಿ ॥

ಪೋಲಿಸ್ ಅಧಿಕಾರಿ ಕೆಂಡಕಾರುತ ತಳ್ಳಿದ ಬಾಬಾರ ಜೈಲಿಗೆ
ಭಕ್ತಜನರೆಲ್ಲರೂ ಕಳವಳದಿ, ಮೂಕರಾಗಿ ನೋಡುತ್ತಿರಲು ॥೨೬॥

ದುರ್ವರ್ತನೆಯ ಅಧಿಕಾರಿ ಸಾಯುವನೆಂದರು ಹತ್ತು ದಿನದಲಿ
ದುರುಳ ದುರಾಚಾರಿ ಅಧಿಕಾರಿಯು ದುರ್ಮರಣಕ್ಕೆ ಬಲಿಯಾದ ॥೨೭॥

ಸಂಚಾರ ಮಾಡುತ ತೆಲಗಿ ಗ್ರಾಮಕ್ಕೆ ಬಂದರು ಬಾಲಗುರು
ಅಟ್ಟಹಾಸದಿ ಅಂಜಿಸುತ್ತಾ ಪುಂಡಾಟಿಕೆಯ ಮಾಡುತಲಿದ್ದರು ॥೨೮॥

ಕಿಡಿಗೇಡಿ ಬಾಲಕನ ಕೊಲ್ಲಿರೆಂದು ಕೋವಿಯ ಹಿಡಿದು ಕೂಗಿದರು
ಗುಡ್ಡದ ಮೇಲಿನ ಕುದುರೆಯ ಏರಿ ಗುಂಡು ತಪ್ಪಿಸಿ ಓಡಿದರಾಗ ॥೨೯॥

ಎರಡಡಿ ದ್ವಾರದಿ ಹೋಯ್ತು ಕುದುರೆಯು ಗರ್ಭಗುಡಿಯ ಬಳಸಿ ಬಂದಿತು
ಸಾಮಾನ್ಯನಲ್ಲಯೆಂದು ತಿಳಿದು ಕುದುರೆ ಸ್ವಾಮಿ ಎಂದು ಕರೆದರು ಆಗ ॥೩೦॥

॥ ಕೇಳಿ ಕೇಳಿ ॥

ತೆಲಗಿ ಜಾತ್ರೆಯ ಸಮಯದಿ ಭಕ್ತರು ಪ್ರಸಾದವ ಮಾಡುತ್ತಿರಲು
ಕುದಿಯುತ್ತಿದ್ದ ಕಡಾವಿಯಲ್ಲಿ ಸಜ್ಜಿಗೆ ಕೈಯಲ್ಲಿ ತಿರುವಿದರು ॥೩೧॥

ಬೆಂಗಳೂರು ಆಶ್ರಮದಿ ವಕೀಲ ನಾಯಕ ಧ್ಯಾನದಿ ಮಗ್ನರಾಗಿರಲು
ಅರ್ಧಡಿ ಅಂತರದಿ ತೇಲುತಲಿದ್ದರು ಭಕ್ತರು ದಂಗಾಗಿ ನೋಡಿದರು ॥೩೨॥

ನಿತ್ಯ ಆರತಿಗೆ ನೀನು ಬಾ ನ್ಯಾಯಾಧೀಶನ ಮಾಡುವನೆಂದರು
ಸತ್ಯವಾಯಿತು ಗುರುವಾಣಿಯೆಂದು ಭಕ್ತರೆಲ್ಲರೂ ಹೊಗಳಿದರು ॥೩೩॥

ಭಕ್ತೆ ಶ್ರೀಮತಿ ರಾಜಪುರೋಹಿತ ರೋಗದಿ ಬಳಲಿ ಕೊನೆಯುಸಿರೆಳೆದಳು
ಬಾಬಾ ಆಕೆಗೆ ನೀರನ್ನು ಕುಡಿಸಿ ಜೀವದಾನವ ಮಾಡಿದರು ॥೩೪॥

ಪ್ರಾರಬ್ಧ ಕರ್ಮವ ಅಳಿಸಲೂ ಯಾರಿಗೂ ಎಂದಿಗೂ ಸಾಧ್ಯವಿಲ್ಲ
ಸದಾನಂದರೂ ಒಬ್ಬರೆ ಕರ್ಮವ ಕಳೆಯಲು ಸಮರ್ಥರು ॥೩೫॥

ಸರ್ವಾರ್ಥ ಸಾಧನೆಗೆ ಭಕ್ತಿಯೇ ಮೂಲ ಎಂಬ ಸಿದ್ದಾಂತವ ಸಾರಿದರು
ಭಕ್ತಿಯಿಂದಲೇ ಜನನ ಮರಣಗಳ ಮುಕ್ತಿಯೆಂದು ಹೇಳಿದರೂ ॥೩೬॥

ಮನೆ ಮನೆಯಲ್ಲಿ ಬಾಬಾ ಎನ್ನಿ, ಮನ ಮನದಲ್ಲಿ ಸದಾನಂದ ಎನ್ನಿ
ಮನವನು ಮರೆತು ಮಾಧವನರಿತು ಮಾನವ ಜೀವಕೆ ಸಾರ್ಥಕ ತನ್ನಿ ॥೩೭॥

ಜಯ ಜಯ ಬಾಬಾ ಜಯ ಜಯ ಭಗವಾನ್
ಜಯ ಜಯ ಸದಾನಂದ ಗುರುವೇ ಎನ್ನಿ ॥೩೮॥

ಜಯ ಜಯ ಹಾಲುಬಾವಿ ಸ್ವಾಮಿ, ಗುರುವೇ
ಜಯ ಜಯ ಕುದುರೆ ಸ್ವಾಮಿ ಗುರುವೇ ॥೩೯॥

॥ಜೈ ಜೈ ದತ್ತಾ ಜೈಜೈ ಸದಾನಂದ॥

॥ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ ॥